ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಕತ್ತಿ’,’ಘಜನಿ’,’7 ಆಮ್ ಅರಿವು’,’ತುಪಾಕಿ’,’ದರ್ಬಾರ್’ ಮುಂತಾದವುಗಳ ನಿರ್ದೇಶಕರಾದ ಎ ಆರ್ ಮುರುಗದಾಸ್ ಅವರು ವಿಶಿಷ್ಟ ರೀತಿಯ ಸಿನಿಮಾಗಳಿಗೆ ಹೆಸರಾಗಿರುವವರು. ಸದ್ಯ ಅವರು ಹೊಸದೊಂದು ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಅದುವೇ “ಆಗಸ್ಟ್ 16, 1947”. ಇದು ಸ್ವಾತಂತ್ರ್ಯ ಸಂಗ್ರಾಮ ಕಾಲದ ಒಂದು ವಿಭಿನ್ನ ಹಾಗು ವಿಶೇಷ ಕಥೆಯಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಹೊರಹಾಕುವ ಮೂಲಕ ಬಿಡುಗಡೆಯ ದಿನಾಂಕದ ಜೊತೆಗೇ ಸಿನಿಮಾವನ್ನ ಘೋಷಣೆ ಮಾಡಿದೆ.
ಹೊಸ ಪ್ರತಿಭೆ ಎನ್ ಎಸ್ ಪೋನ್ ಕುಮಾರನ್ ಅವರು ಈ ಸಿನಿಮಾಗೆ ಕಥೆ, ಚಿತ್ರಕತೆ ಬರೆಯುವುದರ ಜೊತೆಗೇ ನಿರ್ದೇಶನ ಕೂಡ ಮಾಡಿದ್ದಾರೆ. ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯದ ಎದುರು ಒಂದು ಸಾಮಾನ್ಯ ಹಳ್ಳಿಯ ಜನ ತೊಡೆತಟ್ಟಿ ನಿಂತು ಹೋರಾಡಿ, ಅವರ ನೆಮ್ಮದಿಯನ್ನೇ ಹೇಗೆ ಕಸಿದುಕೊಂಡರು ಎಂಬ ಕಥೆಯನ್ನ ‘ಆಗಸ್ಟ್ 16,1947’ ಸಿನಿಮಾ ಹೊತ್ತು ಬರಲಿದೆ. ಇದುವರೆಗೂ ಯಾರೂ ಹೇಳದ, ತೋರಿಸದ ವಿಭಿನ್ನ ರೀತಿಯ ಸ್ವಾತಂತ್ರ್ಯ ಸಂಗ್ರಾಮದ ಕಥೆ ಇದಾಗಿರಲಿದೆಯಂತೆ. ಇದೊಂದು ಪಾನ್ ಇಂಡಿಯನ್ ಸಿನಿಮಾ ಆಗಿರಲಿದ್ದು, ಏಕ ಕಾಲದಲ್ಲಿ ತಮಿಳು ಭಾಷೆಯ ಜೊತೆಗೇ ಕನ್ನಡ, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪರ್ಪಲ್ ಬುಲ್ ಎಂಟರ್ಟೈನ್ಮೆಂಟ್ ಅರ್ಪಿಸುವ ಎ ಆರ್ ಮುರುಗದಾಸ್, ಓಂ ಪ್ರಕಾಶ್ ಭಟ್, ಮತ್ತು ನರಸೀರಾಮ್ ಚೌಧರಿ ಮೂವರು ಸೇರಿ ನಿರ್ಮಾಣ ಮಾಡುತ್ತಿರುವ ‘ಆಗಸ್ಟ್ 16,1947’ ಸಿನಿಮಾ ಇದೇ ಏಪ್ರಿಲ್ 7ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ಗೌತಮ್ ಕಾರ್ತಿಕ್, ಹೊಸ ನಟಿಯಾದ ರೇವತಿ, ಪುಗಳ್ ಸೇರಿದಂತೆ ಹಲವಿ ಪ್ರತಿಭಾನ್ವಿತ ನಟರ ದಂಡೇ ಚಿತ್ರದ ತಾರಾಗಣದಲ್ಲಿದೆ. ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.



