ಲೋಕೇಂದ್ರ ಸೂರ್ಯ ಅವರು ನಟಿಸಿ ನಿರ್ದೇಶಿಸುತ್ತಿರುವ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ‘ಅಥಿ ಐ ಲವ್ ಯು’ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಅನ್ನು ತಂಡ ಇದೀಗ ಅನಾವರಣಗೊಳಿಸಿದೆ. ಇದೊಂದು ಲವ್ ಸ್ಟೋರಿ ಇರುವಂತಹ ಸಿನಿಮಾ ಆಗಿರಲಿದ್ದು, ಲೋಕೇಂದ್ರ ಸೂರ್ಯ ಹಾಗಿ ಶ್ರಾವ್ಯ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಭಾ ಮಾ ಹರೀಶ್ ಹಾಗು ಕನ್ನಡ ಚಿತ್ರರಂಗದ ಪ್ರಖ್ಯಾತ ಸಾಹಸ ನಿರ್ದೇಶಕ ಥ್ರಿಲರ್ ಮಂಜು ಅವರ ಉಪಸ್ಥಿತಿಯಲ್ಲಿ ಈ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಯಿತು. ಚಾಮುಂಡೇಶ್ವರಿ ಸ್ಟುಡಿಯೋ ಈ ಶುಭಕಾರ್ಯಕ್ಕೆ ಸಾಕ್ಷಿಯಾಯಿತು.


ಈ ಗಳಿಗೆಯಲ್ಲಿ ವೇದಿಕೆಯ ಮೇಲೆ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್, ಶಿಲ್ಪಾ ಶ್ರೀನಿವಾಸ್, ನಿರ್ಮಾಪಕ ರಾಜು ಕಲ್ಕಣಿ ಸಿವಿಜಿ ಪಬ್ಲಿಕೇಷನ್ಸ್, ಚಂದ್ರು ಅವರು ಸೇರಿದಂತೆ ಇನ್ನಿತರ ಗಣ್ಯರುಗಳು ಉಪಸ್ಥಿತರಿದ್ದರು. ಸಿನಿಮಾದ ಚಿತ್ರೀಕರಣ ಮುಗಿದು, ಸದ್ದಿಲ್ಲದೇ ಕುಂಬಳಕಾಯಿ ಒಡೆದಿದ್ದೇವೆ ಎಂದು ನಿರ್ಮಾಪಕರು ತಿಳಿಸಿದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯುವ ಹಂತದಲ್ಲಿದೆ, ಇನ್ನೇನು ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿಯ ಬಾಗಿಲಿಗೆ ನಮ್ಮ ‘ಅಥಿ ಐ ಲವ್ ಯು’ ಸಿನಿಮಾವನ್ನ ತೆಗೆದುಕೊಂಡು ಹೋಗುತ್ತೇವೆ ಎಂದು ನಟ ನಿರ್ದೇಶಕ ಲೋಕೇಂದ್ರ ಸೂರ್ಯ ಅವರು ಹೇಳಿದರು.
ಈ ವೇಳೆ ನಾಯಕನಟಿ ಶ್ರಾವ್ಯ ಅವರು ಪ್ರಸ್ತುತ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎಂದು ತಿಳಿಸಿದರು. ಇನ್ನೇನು ಕೆಲವೇ ದಿನಗಳಲ್ಲಿ ‘ಅಥಿ ಐ ಲವ್ ಯು’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಆಲೋಚನೆ ನಡೆಸುತ್ತಿದೆ.



