ಕನ್ನಡ ಚಿತ್ರರಂಗ ಸದ್ಯ ವಿವಿಧ ಮೈಲಿಗಲ್ಲುಗಳನ್ನು ಏರುತ್ತಿದೆ. ದೊಡ್ಡ ಮಟ್ಟದ ಸಿನಿಮಾಗಳು ಮಾತ್ರವಲ್ಲದೆ ಹೊಸ ಪ್ರಯತ್ನಗಳು, ಸಣ್ಣ ಮಟ್ಟದ ಸಿನಿಮಾಗಳು ಎಲ್ಲವೂ ನಮ್ಮಲ್ಲಿ ಇದೀಗ ಒಂದಾದಮೇಲೆ ಒಂದು ಬರುತ್ತಲೇ ಇದೆ. ಸದ್ಯ ಈ ಸಾಲಿನಲ್ಲಿ ಬರುತ್ತಿರುವ ಹೊಸ ಸಿನಿಮಾ ‘ಅಸ್ಥಿರ’.ಈ ಹಿಂದೆ ಮೂರು ಸಿನೆಮಾಗಳನ್ನು ನಿರ್ದೇಶಿಸಿರುವ ಅನುಭವ ಹೊಂದಿರುವಂತಹ ಪ್ರಮೋದ್ ಎಸ್ ಆರ್ ಅವರು ಹೊಸಬರ ತಂಡದ ಜೊತೆ ಈ ಹೊಸ ಸಿನಿಮಾವನ್ನ ಸಿದ್ದಪಡಿಸಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಅನ್ನು ‘ಎಸ್ ಆರ್ ಪ್ರಿವಿವ್ ಚಿತ್ರಮಂದಿರ’ದಲ್ಲಿ ಅದ್ದೂರಿಯಾದ ಟ್ರೈಲರ್ ಬಿಡುಗಡೆ ಸಮಾರಂಭದ ಮೂಲಕ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷರು ಹಾಗು ಪತ್ರಕರ್ತರು ಆಗಿರುವ ಎನ್ ಆರ್ ಕೆ ವಿಶ್ವನಾಥ ಅವರು ಟ್ರೈಲರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರರಂಗದಲ್ಲಿ ಹತ್ತು ವರ್ಷಗಳ ಅನುಭವ ಹೊಂದಿರುವಂತಹ ಅನಿಲ್ ಸಿ ಆರ್ ಅವರು, ಸಿನಿಮಾದ ಕಥೆ ಬರೆದಿರುವುದಲ್ಲದೆ, ‘ವಿರಾಜ್ ರೆಕಾರ್ಡಿಂಗ್ ಸ್ಟುಡಿಯೋ’ ಎಂಬ ಹೆಸರಿನಲ್ಲಿ ಬಂಡವಾಳ ಹೂಡಿದ್ದಾರೆ. ವಿಶೇಷವೆಂದರೆ, ಅನಿಲ್ ಸಿ ಆರ್ ಅವರೇ ಚಿತ್ರದ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ನಿರ್ದೇಶಕ ಪ್ರಮೋದ್ ಎಸ್ ಆರ್ ಅವರು ಉಪನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.


ತ್ರಿಕೋನ ಪ್ರೇಮಕತೆ ಹೊಂದಿರುವ ಈ ಸಿನಿಮಾದಲ್ಲಿ ಮನಸ್ಥಿತಿ ಸರಿ ಇಲ್ಲದ ಯುವಕನೊಬ್ಬ ಪ್ರೀತಿಯಲ್ಲಿ ಸೋತು ಏನೆಲ್ಲಾ ಅನುಭವಗಳನ್ನ ಕಾಣುತ್ತಾನೆ ಎಂದು ಹೇಳಲಾಗಿದೆ. ಬನ್ನೂರು, ಕುಮಟಾ, ಹೊನ್ನವರ ಮುಂತಾದ ಕಡೆಗಳಲ್ಲಿ ಸಾಗುವ ಈ ಕಥೆಯನ್ನು ಥ್ರಿಲರ್ ರೀತಿಯಲ್ಲಿ ಅಂತ್ಯ ಹಾಡಲಾಗಿದೆ. ಕಾವೇರಿ ಹದಡಿ ಎಂಬ ಯುವಪ್ರತಿಭೆ, ಕಾಲೇಜು ಹುಡುಗಿಯೊಬ್ಬಳ ಪಾತ್ರದಲ್ಲಿ ನಾಯಕಿಯಾಗಿ ನಟಿಸಿದರೆ, ರಾಧೆ ಹಾಗು ಹರಿಣಿನಟರಾಜು ಅವರು ಗೆಳತಿಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಖಳನಾಯಕನ ಪಾತ್ರದಲ್ಲಿ ಬನ್ನೂರು ಶ್ರೀನಿವಾಸ್ ಗೌಡ ಅವರು ನಟಿಸಿದ್ದಾರೆ. ವಿಶೇಷತೆ ಎಂಬಂತೆ ಕಲಾವಿದರ ಮೂಲ ಹೆಸರನ್ನೇ ಪಾತ್ರಗಳಿಗೂ ಆಯ್ದುಕೊಳ್ಳಲಾಗಿದೆ. ವಿನೋದ್ ಆರ್ ಅವರ ಛಾಯಾಗ್ರಹಣ ಹಾಗು ನಿತಿನ್ ರಾಜ್ ಅವರ ಸಂಗೀತ ಚಿತ್ರದಲ್ಲಿರಲಿದೆ. ಇದೆ ಫೆಬ್ರವರಿ ತಿಂಗಳಲ್ಲಿ ಸಿನಿಮಾ ತೆರೆಕಾಣೋ ಸಾಧ್ಯತೆಯಿದೆ.

