HomeNewsಪಾನ್-ಇಂಡಿಯಾ ಮಟ್ಟಕ್ಕೆ 'ಅಶೋಕ ಬ್ಲೇಡ್'! ಬಹುಭಾಷ ಪ್ರೇಕ್ಷಕರನ್ನ ಎದುರುಗಾಣಲಿದ್ದಾರೆ ನೀನಾಸಂ ಸತೀಶ್

ಪಾನ್-ಇಂಡಿಯಾ ಮಟ್ಟಕ್ಕೆ ‘ಅಶೋಕ ಬ್ಲೇಡ್’! ಬಹುಭಾಷ ಪ್ರೇಕ್ಷಕರನ್ನ ಎದುರುಗಾಣಲಿದ್ದಾರೆ ನೀನಾಸಂ ಸತೀಶ್

‘ಡ್ರಾಮಾ’,’ಅಯೋಗ್ಯ’ ಸಿನಿಮಾಗಳ ಮೂಲಕ ಕನ್ನಡಿಗರು ಬಹುವಾಗಿ ಮೆಚ್ಚಿರುವ ನಟರಲ್ಲಿ ಸತೀಶ್ ನೀನಾಸಂ ಅವರು ಕೂಡ ಒಬ್ಬರು. ಕೇವಲ ಕನ್ನಡ ಭಾಷೆಯಲ್ಲೇ ಹಲವು ಹಿಟ್ ಚಿತ್ರಗಳನ್ನ ನೀಡಿರುವ ನೀನಾಸಂ ಸತೀಶ್ ಅವರು ಇದೀಗ ಪಾನ್-ಇಂಡಿಯಾ ಪ್ರೇಕ್ಷಕರನ್ನ ಎದುರುಗಾಣಲು ಸಜ್ಜಾಗುತ್ತಿದ್ದಾರೆ. ಅದುವೇ ‘ಅಶೋಕ ಬ್ಲೇಡ್’ ಎಂಬ ಸಿನಿಮಾದ ಮೂಲಕ. ‘ಲೂಸಿಯ’ ಸಿನಿಮಾದ ಮೂಲಕ ಕನ್ನಡದ ಜೊತೆಗೆ ಭಾರತೀಯ ಚಿತ್ರರಂಗದಾದ್ಯಂತ ಪ್ರಸಿದ್ಧಿ ಪಡೆದ ಇವರು, ಇದೀಗ ಒಂದು ಪರಿಪೂರ್ಣ ಪಾನ್-ಇಂಡಿಯನ್ ಸಿನಿಮಾದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಿರುತೆರೆಯಲ್ಲಿ ಪಳಗಿದಂತಹ ವಿನೋದ್ ಧೊಂಡಾಳೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಅಶೋಕ ಬ್ಲೇಡ್’, ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಬಗ್ಗೆ ನಾಯಕನಟ ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ.

‘ಅಶೋಕ ಬ್ಲೇಡ್’ ಏಕೆ ಪಾನ್-ಇಂಡಿಯಾ ಮಾಡಲು ಹೊರಟಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, “ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ. ಇದೊಂದು ಪ್ರಾದೇಶಿಕ ಕಥೆ. ಸುಮಾರು 70ರ ದಶಕದ ಕಾಲಘಟ್ಟದಲ್ಲಿ ನಡೆಯುವಂತದ್ದು. ಈ ರೀತಿಯ ಗಟ್ಟಿಯಾದ ಪ್ರಾದೇಶಿಕ ಕಥೆಗಳೇ ಜನರನ್ನ ಹೆಚ್ಚು ಆಕರ್ಷಿತವಾಗಿಸುತ್ತವೆ. ಉದಾಹರಣೆಗೆ ‘ಕಾಂತಾರ’.ಅದೇ ರೀತಿ ‘ಅಶೋಕ ಬ್ಲೇಡ್’ ನಲ್ಲಿನ ಕಥೆ ಕೂಡ ಪ್ರಭಾವ ಬೀರುವಂತದ್ದು. ಜೊತೆಗೆ ಚಿತ್ರತಂಡದ ಮೇಕಿಂಗ್ ಕೂಡ ಅಷ್ಟೇ ಅದ್ಭುತವಾಗಿದೆ” ಎನ್ನುತ್ತಾರೆ

‘ಅಶೋಕ ಬ್ಲೇಡ್’ ಚಿತ್ರಕ್ಕೆ ‘ಬೆಲ್ ಬಾಟಮ್’ ಖ್ಯಾತಿಯ ಕಥೆಗಾರ ಟಿ ಕೆ ದಯಾನಂದ್ ಅವರು ಕಥೆ ಬರೆದಿದ್ದಾರೆ. ಇದು ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದ್ದು, ನಾಯಕ ಸತೀಶ್ ಅವರು ತಮಿಳು ಹಾಗು ತೆಲುಗು ಭಾಷೆಗಳನ್ನು ಕಲಿಯುವ ಕೆಲಸಕ್ಕೆ ಕೈ ಹಾಕಿದ್ದು, ಅವರೇ ಈ ಎರಡು ಭಾಷೆಗಳಲ್ಲೂ ಡಬ್ ಮಾಡಲು ಸಿದ್ದರಾಗುತ್ತಿದ್ದಾರೆ. “ಈಗಾಗಲೇ ‘ಲೂಸಿಯ’ ಸಿನಿಮಾದ ಮೂಲಕ ನೆರೆಯ ಭಾಷೆಯ ಚಿತ್ರರಂಗಗಳಿಗೆ ಪರಿಚಿತನಾಗಿದ್ದೇನೆ. ಈ ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳು ಕಳೆದರೂ ಕೂಡ ಈಗಲೂ ಪರ ಚಿತ್ರರಂಗದ ತಂತ್ರಜ್ಞರು ಸತೀಶ್ ನೀನಾಸಂ ಎಂದರೆ ‘ಲೂಸಿಯ’ ಎಂದೇ ಗುರುತಿಸುತ್ತಾರೆ. ಇತ್ತೀಚೆಗೆ ತಮಿಳಿನ ನಟರಾದ ಸೂರ್ಯ ಹಾಗು ಅವರ ಸಹೋದರ ಕಾರ್ತಿ ಕೂಡ ಭೇಟಿಯಾದಾಗ ‘ಲೂಸಿಯ’ ಸಿನಿಮಾದ ಬಗ್ಗೆಯೇ ಮಾತನಾಡಿದ್ದರು. ಹಾಗಾಗಿ ಈ ‘ಅಶೋಕ ಬ್ಲೇಡ್’ ಸಿನಿಮಾ ನಾನು ಪಾನ್ ಇಂಡಿಯಾ ಪ್ರೇಕ್ಷಕರನ್ನ ಎದುರುಗಾಣಲು ಸೂಕ್ತ ಸಿನಿಮಾ ಎನಿಸಿತು” ಎನ್ನುತ್ತಾರೆ ಸತೀಶ್.

‘ಅಶೋಕ ಬ್ಲೇಡ್’ಗಾಗಿ ಮೈಸೂರು, ನಂಜನಗೂಡು ಹಾಗು ಚಾಮರಾಜನಗರದ ಸುತ್ತ ದೊಡ್ಡ ಸೆಟ್ ಗಳನ್ನೇ ಏರಿಸಿ ಚಿತ್ರೀಕರಣ ನಡೆಸಲಾಗಿದೆ. ಇದು ಸತೀಶ್ ಅವರ ವೃತ್ತಿಯಲ್ಲೇ ಅತೀ ಹೆಚ್ಚಿನ ಬಜೆಟ್ ನ ಸಿನಿಮಾ ಎನ್ನಲಾಗುತ್ತಿದೆ. ಅಲ್ಲದೇ ಇದು ನನಗೆ ಒಂದು ವಿಶೇಷ ಹಾಗು ಸವಾಲಿನ ಸಿನಿಮಾ ಎಂದು ಸ್ವತಃ ಸತೀಶ್ ಅವರು ಹೇಳಿಕೊಂಡಿದ್ದಾರೆ. ಸತೀಶ್ ನೀನಾಸಂ ಅವರು ಈ ಚಿತ್ರದಲ್ಲಿ 25,35 ಹಾಗೂ 75 ವರ್ಷಗಳ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ಐತಿಹಾಸಿಕ ಯುದ್ಧದ ದೃಶ್ಯವೊಂದಕ್ಕೆ ಸೆಟ್ ಹಾಕಲಾಗಿದ್ದು, ಈ ದೃಶ್ಯದಲ್ಲಿ ನಟಿಸಲು ಸೂಪರ್ ಸ್ಟಾರ್ ಒಬ್ಬರು ಬರಲಿದ್ದು, ಸದ್ಯದಲ್ಲೇ ಅವರು ಕೂಡ ತಂಡವನ್ನ ಸೇರಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ 90% ಮುಗಿದಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಿದೆ.

RELATED ARTICLES

Most Popular

Share via
Copy link
Powered by Social Snap