ಹಲವು ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿ ನಟಿಸುತ್ತಾ, ಜನರನ್ನ ಮೆಚ್ಚಿಸಿದ ನಟ ಅನಿರುಧ್, ಇತ್ತೀಚಿನ ‘ಜೊತೆಜೊತೆಯಲಿ’ ಧಾರವಾಹಿ ಮೂಲಕ ಕಿರುತೆರೆಯ ಪ್ರೇಕ್ಷಕರಿಗೂ ಮನೆಮಗನಂತಾಗಿ ಬಿಟ್ಟರು. ಸದ್ಯ ಅನಿರುಧ್ ಮತ್ತೆ ಬೆಳ್ಳಿತೆರೆಯ ಮೇಲೆ ನಾಯಕನಾಗಿ ಮರಳಲಿದ್ದಾರೆ. ಇವರ ಹೊಸ ಸಿನಿಮಾ ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ಆರಂಭ ಕಂಡಿದೆ. ಈ ಶುಭಕಾರ್ಯವನ್ನ ಭಾರತಿ ವಿಷ್ಣುವರ್ಧನ್ ಅಮ್ಮನವರ ಕೈಯಿಂದ ಆಗಿದ್ದು ಮತ್ತೊಂದು ವಿಶೇಷ.


ಈ ವರ್ಷ ಬಿಡುಗಡೆಯಾದ ವಿಜಯ್ ರಾಘವೇಂದ್ರ ಅವರ ಅಭಿನಯದ ಏಕಪಾತ್ರದ ಜನಮೆಚ್ಚಿದ ಸಿನೆಮಾ ‘ರಾಘು’ವನ್ನು ನಿರ್ದೇಶನ ಮಾಡಿದ್ದ ಎಂ ಆನಂದ್ ರಾಜ್ ಅವರು ಇನ್ನೂ ಹೆಸರಿಡದ ಈ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅವರೇ ಬರೆದಿರುವ ಕಥೆಗೆ ಗಣೇಶ್ ಪರಶುರಾಮ್ ಅವರು ಚಿತ್ರಕತೆ ಹಾಗು ಸಂಭಾಷಣೆ ರಚಿಸುತ್ತಿದ್ದಾರೆ. ದಮ್ತಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರೂಪ ಡಿ ಎನ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಡಾರ್ಕ್ ಕಾಮಿಡಿಯ ಜೊತೆಗೆ ಥ್ರಿಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅನಿರುದ್ ಅವರಿಗೆ ನಾಯಕಿಯರಾಗಿ ಲವ್ ಮೋಕ್ಟೇಲ್ 2 ಖ್ಯಾತಿಯ ಚೆಲುವೆ ರೇಚೆಲ್ ಡೇವಿಡ್ ಹಾಡು ನಟಿ ನಿಧಿ ಸುಬ್ಬಯ್ಯ ಅವರು ಬಣ್ಣ ಹಚ್ಚಲಿದ್ದಾರೆ. ಇವರುಗಳ ಜೊತೆಗೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿಮುಂತಾದವರು ನಟಿಸಲಿದ್ದಾರೆ.


ಇತ್ತೀಚಿಗೆ ಮೈಸೂರಿನ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ಸ್ಕ್ರಿಪ್ಟ್ ಪೂಜೆ ನಡೆಸಿಕೊಂಡ ಈ ನೂತನ ಸಿನಿಮಾಗೆ ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ, ಬಿ.ಆರ್ ನವೀನ್ ಕುಮಾರ್ ಅವರ ಸೌಂಡ್ ಡಿಸೈನ್, ವಿಕ್ರಾಂತ್ ರೋಣ ಸಿನಿಮಾ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಇರಲಿದೆ.
ಉತ್ತಮ ತಂತ್ರಜ್ಞರ ತಂಡ, ಹಾಗು ಕಲಾವಿದರ ದಂಡು ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಆಗಸ್ಟ್ 10ರಿಂದ ಮಂಗಳೂರು, ಬೆಂಗಳೂರು ಹಾಗು ತುಮಕೂರು ವಿಭಾಗದಲ್ಲಿ ನಡೆಯಲಿದೆ. ಚಿತ್ರದ ಪ್ರಮುಖ ಸದಸ್ಯರು, ಕಲಾವಿದರು ಈ ಸ್ಕ್ರಿಪ್ಟ್ ಪೂಜೆಯಲ್ಲಿ ಪಾಲ್ಗೊಂಡಿದ್ದರು.



