ಕನ್ನಡ ಮಾತ್ರ ಎಂದಲ್ಲ, ವಿವಿಧ ಚಿತ್ರರಂಗಗಳಲ್ಲೂ ಕೂಡ ಮೈ ನವೀರೇಳಿಸುವ ಥ್ರಿಲರ್ ಸಿನಿಮಾಗಳಿಗೆ ಕಾಯುವಂತಹ ಅದೆಷ್ಟೋ ಸಿನಿಪ್ರೇಮಿಗಳಿದ್ದಾರೆ. ಅಂತದ್ದೇ ಒಂದು ಸಸ್ಪೆನ್ಸ್ ಥ್ರಿಲರ್ ಸಿನಿಮಾ ಇದೀಗ ನಮ್ಮ ಕನ್ನಡದ ಹೊಸಪ್ರತಿಭೆಗಳಿಂದ ಬರುತ್ತಿದೆ. ಅದುವೇ ‘ಅಂಬುಜಾ’ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಸದ್ಯ ಎಲ್ಲೆಡೆ ನಡುಕ ಹುಟ್ಟಿಸಲು ಆರಂಭಿಸಿದ್ದಾಳೆ ‘ಅಂಬುಜಾ’. ಶುಭಾ ಪೂಂಜಾ, ರಜನಿ, ಪದ್ಮಜಾ ರಾವ್, ಇನ್ನೂ ಹಲವು ಪ್ರತಿಭಾನ್ವಿತ ನಟರು ನಟಿಸಿರುವ, ಶ್ರೀನಿ ಹನುಮಂತರಾಜು ಅವರ ನಿರ್ದೇಶನದ ಈ ಸಿನಿಮಾ ಇದೇ ಜುಲೈ 21ಕ್ಕೆ ಎಲ್ಲೆಡೆ ಬಿಡುಗಡೆ ಕಾಣಲಿದೆ.
ಮಲ್ಲಿಗೆಪುರ ಎಂಬ ಪುಟ್ಟ ಗ್ರಾಮದಲ್ಲಿ ಕೇವಲ ತನ್ನ ಮಗಳ ಜೊತೆಗೆ ಜೀವನ ಸಾಗಿಸುತ್ತಾ, ಸಂತೋಷವಾಗಿರುವ ‘ಅಂಬುಜಾ’ ಕಥೆಯ ಪ್ರಮುಖ ಪಾತ್ರ. ಇನ್ನು ಬೆಂಗಳೂರಿನ ನಿಷ್ಣಾತ ವೈದ್ಯ ಒಂದೆಡೆಯಾದರೆ, ಏನನ್ನೋ ಸಾಧಿಸಬೇಕು ಎಂಬ ಛಲದಲ್ಲಿ ಹೊಸ ಹುಡುಕಾಟದಲ್ಲಿರುವ ಪತ್ರಕರ್ತೆ ಇನ್ನೊಂದೆಡೆ. ಇವರೆಲ್ಲರ ಬದುಕು ಹೇಗೆ ಕೂಡಿಕೊಳ್ಳುತ್ತದೆ? ಇದರ ಹಿಂದಿನ ನಿಗೂಢತೆ ಏನು? ಮುಂದೆ ಇವರ ಜೀವನ ಎಲ್ಲಿಗೆ ಹೋಗಿ ತಲುಪುತ್ತದೆ? ಎಂಬುದನೆಲ್ಲ ನಾವು ಸಿನಿಮಾದಲ್ಲೇ ನೋಡಬೇಕಾಗಿದೆ.


ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ತಿಳಿಸಿರುವುದು ಇಷ್ಟು. ಟ್ರೈಲರ್ ನಲ್ಲಿಯೇ ಥ್ರಿಲ್ ನೀಡುವ ಅಂಶಗಳು ಹಲವಾರಿದ್ದು, ಇನ್ನು ಪೂರ್ಣ ಸಿನಿಮಾ ಒಂದೊಳ್ಳೆ ಸಸ್ಪೆನ್ಸ್ ಥ್ರಿಲರ್ ಆಗಿರಲಿರುವ ಸಂಪೂರ್ಣ ಭರವಸೆಯಿದೆ ಎನ್ನುತ್ತಾರೆ ಸಿನಿಪ್ರೇಮಿಗಳು.
ಎಸ್ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಶೀನಾಥ್ ಡಿ ಮಡಿವಾಳರ್ ಅವರು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಕಥೆ ಹಾಗು ಸಾಹಿತ್ಯವನ್ನ ಕೂಡ ಅವರೇ ಬರೆದಿದ್ದಾರೆ. ಚಿತ್ರಕತೆ ಹಾಗು ನಿರ್ದೇಶನದ ಜವಾಬ್ದಾರಿ ಶ್ರೀನಿ ಹನುಮಂತರಾಜು ಅವರದ್ದು. ಮುರಳಿಧರ್ ಅವರ ಛಾಯಾಗ್ರಹಣ ಹಾಗು ಪ್ರಸನ್ನ ಕುಮಾರ್ ಎಂ ಎಸ್ ಅವರ ಸಂಗೀತ ಸಿನಿಮಾದಲ್ಲಿದೆ. ಶುಭ ಪೂಂಜಾ, ಗೋವಿಂದೆ ಗೌಡ, ದೀಪಕ್, ಪದ್ಮಜಾ ರಾವ್, ರಜನಿ ಸೇರಿದಂತೆ ಹಲವು ಪ್ರತಿಭಾನ್ವಿತ ನಟರು ಅಭಿನಯಿಸಿರುವ ಈ ಸಿನಿಮಾ ಇದೇ ಜುಲೈ 21ಕ್ಕೆ ಎಲ್ಲೆಡೆ ತೆರೆಕಾಣಲಿದೆ.

