ಕನ್ನಡದ ಹಿಟ್ ಸಿನಿಮಾಗಳಾದ ‘ಅನಾಥರು’,’ಮಂಡ್ಯ’ ಇತ್ತೀಚಿನ ‘ದಮಯಂತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿಯ ರಾಧಿಕಾ ಕುಮಾರಸ್ವಾಮಿ ಅವರ ಹೊಸ ಸಿನಿಮಾ ‘ಅಜಾಗ್ರತ’. ವಿಶೇಷವೆಂದರೆ ಈ ಸಿನಿಮಾ ಕನ್ನಡ ಮೊದಲಾಗಿ ಒಟ್ಟು 7 ಭಾಷೆಗಳಲ್ಲಿ ತಯಾರಾಗುತ್ತಿದೆ. ನಾಲ್ಕು ಚಿತ್ರರಂಗಗಳ ಪ್ರಖ್ಯಾತ ನಟರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಎಂ ಶಶಿಧರ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದೂ, ರವಿರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಅಜಾಗ್ರತ’ ಒಂದು ಸೈಕಲಾಜಿಕಲ್ ಕ್ರೈಂ ಥ್ರಿಲರ್ ರೀತಿಯ ಕಥೆ ಆಗಿರಲಿದ್ದು, ಏಳು ಭಾಷೆಗಳಲ್ಲೂ ಒಮ್ಮೆಗೆ ನೇರವಾಗಿ ಚಿತ್ರೀಕರಣಗೊಳ್ಳುತ್ತಿರುವುದು ಚಿತ್ರದ ಇನ್ನೊಂದು ವಿಶೇಷ. ಸದ್ಯ ಚಿತ್ರದ ಮುಹೂರ್ತ ಹೈದ್ರಾಬಾದಿನ ರಾಮನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗದ ವಿವಿಧ ಗಣ್ಯರು, ಈ ಶುಭಸಮಾರಂಭದಲ್ಲಿ ಉಪಸ್ಥಿತರಿದ್ದು, ತಂಡಕ್ಕೆ ಶುಭಕೋರಿದರು.


ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ ಎಂ ರತ್ನಂ ಅವರು ಸಿನಿಮಾದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಹೆಸರಾಂತ ವಿತರಕರಾದ ಟಾಗೋರ್ ಮಧು ಅವರು ಕ್ಯಾಮೆರಾ ಚಾಲನೆ ಮಾಡಿದರು. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ ‘ಘಾರ್ಗ’ ಸಿನಿಮಾವನ್ನ ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ಚಿತ್ರ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಾಹಣ, ರವಿವರ್ಮ ಅವರ ಸಾಹಸ ಹಾಗು ಶ್ರೀಹರಿ ಅವರ ಸಂಗೀತ ಸಿನಿಮಾದಲ್ಲಿರಲಿದೆ. ಒಟ್ಟು ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಡಬ್ಬಿಂಗ್ ಮಾಡದೇ ಚಿತ್ರೀಕರಣದ ಸಂಧರ್ಭದಲ್ಲಿಯೇ ಏಳು ಭಾಷೆಗಳಲ್ಲೂ ಚಿತ್ರೀಕರಿಸಲಿರುವುದು ಈ ‘ಅಜಾಗ್ರತ’ ಚಿತ್ರದ ವೈಶಿಷ್ಟ್ಯ!
ಸ್ಯಾಂಡಲ್ವುಡ್ ನಿಂದ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ವಿನಯ ಪ್ರಸಾದ್, ದೇವರಾಜ್, ಸುಚೆಂದ್ರ ಪ್ರಸಾದ್, ಮುಂತಾದವರು ಬಣ್ಣ ಹಚ್ಚುತ್ತಿದ್ದರೆ, ತೆಲುಗಿನಿಂದ, ರಾವ್ ರಮೇಶ್, ರಾಘವೇಂದ್ರ ಶ್ರವಣ್, ಪುಷ್ಪಾ ಸುನಿಲ್, ತಮಿಳಿನ ಆದಿತ್ಯ ಮೆನನ್, ಸಮುದ್ರ ಕಣಿ, ಜಯಪ್ರಕಾಶ್ ಮುಂತಾದವರು ನಟಿಸುತ್ತಿದ್ದಾರೆ. ಜೊತೆಗೇ ಬಾಲಿವುಡ್ ನ ಪ್ರಖ್ಯಾತ ನಟ ಶ್ರೇಯಸ್ ತಲಪಾಡೇ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ.



