‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’,’ಕವಲುದಾರಿ’ ರೀತಿಯ ವಿಭಿನ್ನವಾದ ಹಾಗು ಯಶಸ್ವಿಯಾದ ಹಿಟ್ ಸಿನೆಮಾಗಳನ್ನು ಕನ್ನಡಿಗರಿಗೆ ನೀಡಿರುವ ಹೆಸರಾಂತ ನಿರ್ದೇಶಕ ಹೇಮಂತ್ ಎಂ ರಾವ್ ಅವರು. ಸದ್ಯ ‘ಸಪ್ತ ಸಾಗರದಾಚೆ ಎಲ್ಲೋ’ ಕಳೆದು ಹೋಗಿರುವ ಇವರು ಹೊಸ ಸಿನಿಮಾವೊಂದನ್ನ ನಿರ್ಮಾಣ ಮಾಡಿ ಝೆಡ್ ಚಿತ್ರದ ಟೀಸರ್ ಬಿಡುಗಡೆಗೆ ಮುಂದಾಗಿದ್ದಾರೆ. ಅದುವೇ ‘ಅಜ್ಞಾತವಾಸಿ’. ‘ಗುಳ್ಟು’ ಸಿನಿಮಾ ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಅವರು ಆಕ್ಷನ್ ಕಟ್ ಹೇಳಿರುವ ಈ ಹೊಸ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ.
ತಮ್ಮ ‘ಲೋಸ್ಟ್ ಎನ್ ಫೌಂಡ್ ಫಿಲಂಸ್’ ಸಂಸ್ಥೆಯ ಮೂಲಕ ಈ ಸಿನಿಮಾವನ್ನ ನಿರ್ದೇಶಕ ಹೇಮಂತ್ ಎಂ ರಾವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ‘ಗುಳ್ಟು’ ಸಿನಿಮಾದ ಮೂಲಕ ಜನಮನ್ನಣೆ ಪಡೆದಿರುವಂತಹ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ಚಿತ್ರದ ಚುಕ್ಕಾಣಿ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟರಾಗಿ ಗುರುತಿಸಿಕೊಂಡಿರುವ, ಅಂದಿನಿಂದ ಇಂದಿನವರೆಗೂ ಯಾವ ರೀತಿಯ ಪಾತ್ರವೇ ಆದರೂ ನಿರಾಯಾಸವಾಗಿ ನಟಿಸುವಂತಹ ಪ್ರಭುದ್ಧ ನಟರಾದ ರಂಗಾಯಣ ರಘು ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಹೊಸ ಸಿನಿಮಾದ ಟೀಸರ್ ಇದೇ ಏಪ್ರಿಲ್ 7ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಘೋಷಣೆ ಮಾಡಿದ್ದಾರೆ.
ರಂಗಾಯಣ ರಘು ಅವರ ಜೊತೆಗೆ ಪ್ರತಿಭಾನ್ವಿತ ನಟರಾದ ಸಿದ್ದು ಮೂಲಿಮನಿ, ಪಾವನಾ ಗೌಡ,ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಹಾಗು ಇನ್ನು ಹಲವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತವಿದ್ದು, ಸದ್ಯ ಬಿಡುಗಡೆಯಗಿರುವ ಪೋಸ್ಟರ್ ಗಳು ಸಿನಿಮಾದ ಬಗೆಗೆ ವಿಭಿನ್ನವಾದ, ಕುತೂಹಲಕಾರಿಯಾದ ಅಭಿಪ್ರಾಯಗಳನ್ನ ಹುಟ್ಟಿಸುತ್ತಿವೆ. ಸಿನಿಮಾದ ಟೀಸರ್ ಏಪ್ರಿಲ್ 7ಕ್ಕೆ ಬಿಡುಗಡೆಯಗುತ್ತಿದ್ದು, ಮೊದಲಿನಿಂದಲೂ ಹೇಮಂತ್ ರಾವ್ ಅವರ ಸಿನೆಮಾಗಳನ್ನು ಇಷ್ಟ ಪಟ್ಟವರು, ಅವರ ಪ್ರಭುದ್ದತೆಯ ಮೇಲಿನ ವಿಶ್ವಾಸದಿಂದ ಈ ಚಿತ್ರಕ್ಕಾಗಿಯೂ ಕಾಯುತ್ತಿದ್ದಾರೆ. ಪೋಸ್ಟರ್ ಗಳು ಕುತೂಹಲ ಹುಟ್ಟಿಸುತ್ತಿವೆ.

