HomeNewsಜನಮನ ಗೆಲ್ಲುತ್ತಿದೆ 'ಅಗ್ರಸೇನಾ'! ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್

ಜನಮನ ಗೆಲ್ಲುತ್ತಿದೆ ‘ಅಗ್ರಸೇನಾ’! ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್

ಕಳೆದ ವಾರ, ಅಂದರೇ ಜೂನ್ 24ರಂದು ಎಲ್ಲೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯದಂತಹ ‘ಅಗ್ರಸೇನಾ’ ಸಿನಿಮಾ ಸದ್ಯ ಪ್ರೇಕ್ಷಕರ ಮನಗೆಲ್ಲುತ್ತಿದೆ. ಇದಕ್ಕೆ ಚಿತ್ರತಂಡದ ಪರಿಶ್ರಮದ ಜೊತೆಗೆ ಮಾಧ್ಯಮಗಳು ತಮ್ಮ ವಿಮರ್ಶೆಯಲ್ಲಿ ಸಿನಿಮಾದ ಬಗ್ಗೆ ಹಂಚಿಕೊಂಡಂತಹ ಉತ್ತಮ ವಿಚಾರಗಳು ಕೂಡ ಕಾರಣ. ಅಂತೆಯೇ ಈ ವಿಚಾರವಾಗಿ ಕೃತಜ್ಞತೆ ತಿಳಿಸಲು ಹಾಗು ತಮ್ಮ ಸಂತಸವನ್ನು ವ್ಯಕ್ತಪಡಿಸಲು ‘ಅಗ್ರಸೇನಾ’ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಿತ್ತು.

ಈ ವೇಳೆ ಮಾತನಾಡಿದ ನಿರ್ಮಾಪಕರಾದ ಶ್ರೀಮತಿ ಮಮತಾ ಜಯರಾಮ ರೆಡ್ಡಿ ಹಾಗು ಜಯರಾಮ್ ರೆಡ್ಡಿ ಅವರು, “ನಮ್ಮ ಸಿನಿಮಾ ನಾವು ಅಂದುಕೊಂಡಂತೆ ಯಶಸ್ಸು ಕಾಣುತ್ತಿದೆ. ನಮ್ಮ ಸಿನಿಮಾವನ್ನ, ನಮ್ಮ ತಂಡವನ್ನ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಬಿ.ಸಿ ಸೆಂಟರ್ ನಲ್ಲಿ ಹೆಚ್ಚಾಗಿ ಜನ ನೋಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ 25ದಿನಗಳನ್ನ ಪೂರೈಸುತ್ತದೆ ಎಂಬ ನಂಬಿಕೆ ನಮಗಿದೆ. ಆಗ ಮರಳಿ ಸಿಗೋಣ. ಜಿಲ್ಲೆ ಹಾಗು ತಾಲ್ಲೂಕು ಮಟ್ಟದಲ್ಲಿ ನಮ್ಮ ‘ಅಗ್ರಸೇನಾ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಯಶಸ್ವಿ ಪ್ರದರ್ಶನಕ್ಕೆ ಮಾಧ್ಯಮದವರಾದ ನೀವೂ ಕೂಡ ಪ್ರಮುಖ ಕಾರಣೀಕರ್ತರು” ಎಂದರು.‘ಅಗ್ರಸೇನಾ’ ಚಿತ್ರದ ನಾಯಕನಟ ಅಮರ್ ವಿರಾಜ್ ಮಾತನಾಡಿ, “ನಮ್ಮ ಸಿನಿಮಾಗೆ ಬರುತ್ತಿರುವ ಪ್ರತಿಕ್ರಿಯೆಗಳನ್ನ ನೋಡಿ ತುಂಬಾನೇ ಖುಷಿ ಆಗ್ತಾ ಇದೆ. ಸಿನಿಮಾ‌ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೀವನ ಸಾರ್ಥಕ ಆಯಿತು ಎಂದೆನಿಸುತ್ತಿದೆ. ತೆಲುಗು ಸೆಂಟರ್ ಮುಳಬಾಗಿಲಿನಲ್ಲಿಯೂ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೊಸಬರು ಚಿತ್ರರಂಗಕ್ಕೆ ಬಂದರೆ ಚಿತ್ರರಂಗ ಬೆಳೆಯುತ್ತದೆ. ಹಿರಿಯರು ಕೂಡ ಬೆಂಬಲಿಸಬೇಕು ಎಂದು ಬಯಸುತ್ತೇವೆ” ಎಂದರು. ಇನ್ನೊಬ್ಬ ನಟರಾದ ಅಗಸ್ತ್ಯ ಬೆಳಗೆರೆ ಅವರು ಮಾತನಾಡಿ, “ನಮ್ಮ ಸಿನಿಮಾಗೆ ಇಷ್ಟು ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಪರಿಶ್ರಮ ಕಾರಣ, ನಿರ್ದೇಶಕರು, ಕಲಾವಿದರಿಂದ ಹಿಡಿದು, ಛಾಯಾಗ್ರಾಹಣ, ಸಂಕಲನ ಮಾಡಿದ ತಂತ್ರಜ್ಞರ ವರೆಗೆ ಎಲ್ಲರ ಪರಿಶ್ರಮಗಳೇ ಕಾರಣ ಎನ್ನಬಹುದು. ಒಂದು ಘಟನೆ ಹಂಚಿಕೊಳ್ಳಬೇಕು ಅಂದುಕೊಳ್ಳುತ್ತೇನೆ, ಈ ಚಿತ್ರದ ಕಥೆ ಮಾಡುವ ಸಮಯದಲ್ಲಿ ರಾತ್ರಿ ನಾಯಕ ಅಮರ್ ಗೆ ಹಾವು ಕಚ್ಚಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ಕೊಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಿದೆವು. ಅವರಿಂದಲೇ ಆ ಪಾತ್ರಕ್ಕೆ ಇನ್ನಷ್ಟು ಮೆರಗು ಬಂದಿತು” ಎಂದರು.

ಚಿತ್ರದ ನಿರ್ದೇಶಕ ಮುರುಗೇಶ್ ಕಣ್ಣಪ್ಪ ಅವರು ಮಾತನಾಡಿ, “ಅಗ್ರಸೇನಾ ಚಿತ್ರದ ಗೆಲುವು ನಿಮ್ಮ ಗೆಲವು, ಕಥೆಯನ್ನು ಜನರಿಗೆ ತಲುಪಿಸಿ ಚಿತ್ರದ ಯಶಸ್ಸಿಗೆ ಕಾರಣರಾದ ಮಾಧ್ಯಮದವರಾದ ನಿಮ್ಮೆಲ್ಲರಿಗೂ ಧನ್ಯವಾದ. ನನ್ನ ತಂಡ ನೀಡಿದ ಸಹಕಾರದಿಂದ ಚಿತ್ರಕ್ಕೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌.‌ ಚಿತ್ರದಲ್ಲಿ ಸಂದೇಶ ಚೆನ್ನಾಗಿದೆ ಎಂದು ಯುವ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು” ಎಂದರು. ನಾಯಕನಟಿ ರಚನಾ ದಶರಥ ಅವರು ಮಾತನಾಡಿ, “ನನ್ನ ಗಂಡನವರು ನಿರ್ದೇಶಕರು ಏನು ಹೇಳುತ್ತಾರೋ ಅದನ್ನ ಪಾಲಿಸಿಕೊಂಡು ಹೋಗು ಎಂದಿದ್ದರು. ನಾನು ಅದನ್ನೇ ಮಾಡಿದ್ದೇನೆ. ಇಂದು ರಿಷಿಕಾ, ಅಮರ್ ಪಾತ್ರಗಳು ಜನರ ಮನ ಗೆಲ್ಲುತ್ತಿವೆ ಎಂದರೆ ಅದಕ್ಕೆ ಮುಖ್ಯ ಕಾರಣ ನಿರ್ದೇಶಕರ ವಿಜನ್. ಇದು ನಮ್ಮ ಇಡೀ ‘ಅಗ್ರಸೇನಾ’ ಚಿತ್ರತಂಡದ ಗೆಲುವು ಎನ್ನಬಹುದು” ಎಂದರು. ಅಗ್ರಸೇನಾ ಸಿನಿಮಾಗೆ ಸಂಗೀತ ನೀಡಿರುವ ತ್ಯಾಗರಾಜ್ ಅವರು ಮಾತನಾಡುತ್ತಾ, “ನನ್ನ ಕುಟುಂಬ ‘ಅಗ್ರಸೇನಾ’ ಸಿನಿಮಾ ನೋಡಿ ತುಂಬಾ ಸಂತೋಷಪಟ್ಟರು. ನನ್ನ ತಂದೆ ಸಿನಿಮಾ ನೋಡಿ ಮನೆಗೆ ಬಂದು ಅಪ್ಪಿಕೊಂಡರು. ಅಮ್ಮ‌ ಮುತ್ತು ಕೊಟ್ಟರು. ಇದನ್ನೆ ಮುಂದುವರೆಸು ಎಂದು ಮನಸಾರೆ ಹರಸಿದರು” ಎಂದು ತಮ್ಮ ಸಂತಸವನ್ನ ಹಂಚಿಕೊಂಡರು.

ಸದ್ಯ ಈ ‘ಅಗ್ರಸೇನಾ’ ಸಿನಿಮಾ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಲಭ್ಯವಿದೆ.

RELATED ARTICLES

Most Popular

Share via
Copy link
Powered by Social Snap