‘ಎದೆಗಾರಿಕೆ’,’ಡೆಡ್ಲಿ ಸೋಮ’ ರೀತಿಯ ಹಿಟ್ ಸಿನಿಮಾಗಳನ್ನ ನೀಡಿರುವಂತಹ ಕನ್ನಡದ ನಾಯಕನಟ ಆದಿತ್ಯ ಅವರು ಇದೀಗ ತಮ್ಮ ಹೊಸ ಸಿನಿಮಾವನ್ನ ಸದ್ದಿಲ್ಲದೆ ಆರಂಭಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿರುವ ಇವರು, ಹಲವು ಹಿಟ್ ಸಿನಿಮಾಗಳನ್ನ ನೀಡಿದವರು. ಇದೀಗ ತಮ್ಮ ಮುಂದಿನ ಸಿನಿಮಾವಾಗಿ ಸಸ್ಪೆನ್ಸ್ ಥ್ರಿಲರ್ ಕಥೆಯೊಂದನ್ನು ಆಯ್ದುಕೊಂಡಿದ್ದಾರೆ. ಕಿಶೋರ್ ಮೇಗಳಮನೆ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಇನ್ನೂ ಹೆಸರಿಡದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಚಿಕ್ಕಮಗಳೂರು ಹಾಗು ಬೆಂಗಳೂರು ಪರಿಸರದಲ್ಲಿ ಸುಮಾರು 17ದಿನಗಳ ಚಿತ್ರೀಕರಣವನ್ನ ತಂಡದವರು ಮುಗಿಸಿಕೊಂಡಿದ್ದಾರೆ.


ಮೊದಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಕಿಶೋರ್ ಮೇಗಳಮನೆ ಅವರೇ ಈ ಸಿನಿಮಾದ ಕಥೆ ಚಿತ್ರಕತೆಯ ಜೊತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ, ನರಸಿಂಹಮೂರ್ತಿ ಚಕ್ರಭಾವಿ ಹಾಗೂ ರಾಮಚಂದ್ರಯ್ಯ ಕೆ.ಜಿ ಈ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಅವರು ಈ ಸಿನಿಮಾದಲ್ಲಿ ಆದಿತ್ಯ ಅವರಿಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದು, ಶಿವಮಣಿ, ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇಷ್ಟೆಲ್ಲಾ ತಯಾರಿಗಳ ನಡುವೆಯೂ ಚಿತ್ರದ ಶೀರ್ಷಿಕೆ ಇನ್ನೂ ಹೊರಬಿದ್ದಿಲ್ಲ. ನಿರ್ದೇಶಕರು ಹೇಳುವ ಪ್ರಕಾರ ನಮ್ಮ ಚಂದನವನದ ಸ್ಟಾರ್ ನಟರೊಬ್ಬರು ಸಿನಿಮಾದ ಟೈಟಲ್ ಅನ್ನು ಸದ್ಯದಲ್ಲೇ ಅನಾವರಣಗೊಳಿಸಲಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಇರುವ ಈ ಸಿನಿಮಾಗೆ ತಮ್ಮ ಗಾಯನದಿಂದ ಹೆಸರುವಾಸಿಯಾಗಿರುವ ಶಶಾಂಕ್ ಶೇಷಗಿರಿ ಅವರು ಸಂಗೀತ ನೀಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

