ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ
ಅಭಿಷೇಕ್ ಅಂಬರೀಶ್ ಅವರ ನಾಲ್ಕನೇ ಚಿತ್ರದ ಮೋಷನ್ ಪಿಕ್ಚರ್ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆ ಆಯಿತು.
ಜೂ.ಅಂಬಿ ವಾರಿಯರ್ ಅವತಾರದಲ್ಲಿ ಮಿಂಚಿರುವ ಮೋಷನ್ ಪಿಕ್ಚರ್ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಟ್ರೆಂಡಿಂಗ್ ನಲ್ಲಿದೆ.
ರಾಕ್ ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.


ಸಮಾರಂಭದಲ್ಲಿ ಮಾತಾನಾಡಿದ ಸುಮಲತಾ ಅಂಬರೀಶ್,
ಅಂಬರೀಶ್ ಅವರ ಸ್ಮಾರಕದ ಬಳಿ ಈ ಸಮಾರಂಭ ನಡೆಯುತ್ತಿದೆ. ಚಿತ್ರಕ್ಕೆ ಅಂಬರೀಶ್ ಅವರ ಆಶೀರ್ವಾದ ಸಂಪೂರ್ಣ ಇದೆ. ಇದಕ್ಕೆ ಸಾಕ್ಷಿಯಾಗಿ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಂಬರೀಶ್ ಅವರ ಭಾವಚಿತ್ರದ ಬಲಗಡೆಯಿಂದ ಹೂವು ಬಿತ್ತು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.


ಅಭಿಷೇಕ್ ಅವರಿಗೆ ಸಿನಿಮಾ ಮಾಡಬೇಕೆಂಬುದು ನನಗೆ ಬಹಳ ದಿನಗಳ ಆಸೆ. ಆದರೆ ಚಿತ್ರದ ಕಥೆ ಚೆನ್ನಾಗಿರಬೇಕು ಅಂತ ಕಾಯುತ್ತಿದೆ. ಅಭಿ ಅವರೆ ಈ ಕಥೆಯ ಬಗ್ಗೆ ನನಗೆ ಹೇಳಿದರು. ಇಷ್ಟವಾಯಿತು. ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗಲಿದೆ. ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ, ಅಂಬರೀಶ್ ಅವರ ಆಶೀರ್ವಾದದೊಂದಿಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.
ಚಿತ್ರದ ಬಗ್ಗೆ ಮಾತಾನಾಡಿದ ಜೂ.ರೆಬಲ್ ಸ್ಟಾರ್,
ಅಪ್ಪನ ಹುಟ್ಟುಹಬ್ಬ ಹಾಗೂ ನನ್ನ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಇರುತ್ತಿತ್ತು. ಆದರೆ ನಮ್ಮ ಅಮ್ಮನ ಹುಟ್ಟುಹಬ್ಬದ ದಿನ ಈ ಮೋಷನ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ನನ್ನ ಆಸೆಯಿತ್ತು. ಹಾಗಾಗಿ ಇಂದು ಬಿಡುಗಡೆ ಮಾಡಿದ್ದೀವಿ. ಇದೇ ಅಮ್ಮನಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಉಡುಗೊರೆ. ಮಹೇಶ್ ಕುಮಾರ್ ಮೋಷನ್ ಪೋಸ್ಟರ್ ಬಹಳ ಚೆನ್ನಾಗಿ ಮಾಡಿದ್ದಾರೆ. ಚಿತ್ರವನ್ನು ಅಷ್ಟೇ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು.
ನಾನು ಅಂಬರೀಶ್ ಅಣ್ಣನ ದೊಡ್ಡ ಅಭಿಮಾನಿ. ಅವರ ಮಗ ಅಭಿಷೇಕ್ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ನಿರ್ದೇಶನಕ್ಕೆ ಅವಕಾಶ ನೀಡಿರುವ ರಾಕ್ ಲೈನ್ ವೆಂಕಟೇಶ್ ಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ ಸುಮಲತಾ ಅಂಬರೀಶ್ ಅವರಿಗೆ ಧನ್ಯವಾದ. ರವಿ ಬಸ್ರೂರು, ಟಿ.ಕೆ.ದಯಾನಂದ್ ಸೇರಿದಂತೆ ನನ್ನ ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.



