HomeNewsಪಿ ಆರ್ ಕೆ ಪ್ರೊಡಕ್ಷನ್ಸ್ ನ ಹೊಸ ಸಿನಿಮಾ 'ಆಚಾರ್ ಅಂಡ್ ಕೋ' ಈ ತಿಂಗಳ...

ಪಿ ಆರ್ ಕೆ ಪ್ರೊಡಕ್ಷನ್ಸ್ ನ ಹೊಸ ಸಿನಿಮಾ ‘ಆಚಾರ್ ಅಂಡ್ ಕೋ’ ಈ ತಿಂಗಳ ಅಂತ್ಯಕ್ಕೆ ತೆರೆಗೆ! ಬಹುಪಾಲು ಮಹಿಳೆಯರ ತಂತ್ರಜ್ಞ ವರ್ಗಕ್ಕೆ ‘ಪಿ ಆರ್ ಕೆ’ ಸಾಥ್!

‘ಮಾಯಾಬಜಾರ್’,’ಕವಲುದಾರಿ’ಯಂತಹ ಪ್ರಭುದ್ಧ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಆರಂಭಿಸಿದ್ದ ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ ಇದೀಗ ಸ್ಯಾಂಡಲ್ವುಡ್ ನಲ್ಲಿನ ಹೊಸಪರಿಯ ಸಿನಿಮಾಗಳಿಗೆ, ಹೊಸ ಪ್ರತಿಭೆಗಳಿಗೆ ತವರಾಗಿದೆ. ಉತ್ತಮ ವಿಚಾರಗಳನ್ನ ಹೊಂದಿರುವ, ಅಷ್ಟೇ ಉತ್ತಮ ಮನರಂಜನೆ ನೀಡುವಂತಹ ಸಿನೆಮಾಗಳನ್ನು ನೀಡುತ್ತಾ ಕನ್ನಡಿಗರ ಮನಗೆದ್ದಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ಇದೀಗ ಇನ್ನೊಂದು ಹೊಸಬಗೆಯ ಸಿನಿಮಾವನ್ನ ಹೊತ್ತು ತಂದಿದೆ. ‘ಆಚಾರ್ & ಕೋ’ ಎಂಬ ಈ ಹೊಸ ಸಿನಿಮಾದ ಬಿಡುಗಡೆ ದಿನಾಂಕವನ್ನು ಕೂಡ ಹೊರಹಾಕಿದೆ. ಬಹುಪಾಲು ಮಹಿಳಾ ತಂತ್ರಜ್ಞ ವರ್ಗವನ್ನ ಹೊಂದಿರುವ ಈ ‘ಆಚಾರ್ & ಕೋ’ ಇದೆ ಜುಲೈ 28ಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ. ನಟಿ ಸಿಂಧು ಶ್ರೀನಿವಾಸಮೂರ್ತಿ ಈ ಸಿನಿಮಾದ ಮೂಲಕ ನಟನೆಯ ಜೊತೆಗೆ ನಿರ್ದೇಶನವನ್ನು ಕೂಡ ಮಾಡಿದ್ದಾರೆ.

1960ರ ಕಾಲಘಟ್ಟದಲ್ಲಿ ಬೆಂಗಳೂರಿನ ಒಂದು ಕುಟುಂಬದ ಜೀವನದಲ್ಲಿ ನಡೆವ ಘಟನೆಗಳೇ ಈ ಸಿನಿಮಾದ ಕಥಾವಸ್ತು. ಮೂಲದ ಸಂಪ್ರದಾಯಗಳನ್ನ ನಡೆಸಿಕೊಳ್ಳುತ್ತಾ ಬಂದು, ಅದನ್ನೂ ಬಿಡಲಾಗದೆ, ಇತ್ತ ಎಲ್ಲೆಡೆ ಹಬ್ಬುತ್ತಿರುವ ಆಧುನಿಕತೆಗೂ ಹೊಂದಿಕೊಂಡು ಹೋಗುವಲ್ಲಿ ಈ ಕುಟುಂಬ, ಅದರ ಸದಸ್ಯರು ಎದುರುಗಾಣುವ ಸವಾಲುಗಳು, ಅವರ ಬದುಕಿನಲ್ಲಾಗುವ ಬದಲಾವಣೆಗಳನ್ನ ಸಿನಿಮಾವಾಗಿ ಈ ‘ಆಚಾರ್ ಅಂಡ್ ಕೋ’ನಲ್ಲಿ ತೆರೆಮೇಲೆ ತರಲಿದ್ದಾರೆ. ನೈಜತೆಗೆ ಹತ್ತಿರವಾಗುವಂತೆ ಇರುವ ಈ ಸಿನಿಮಾದ ಕಥೆಯನ್ನ ನೋಡುವ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ನಮ್ಮದೇ ಎಂದು ಭಾವಿಸುತ್ತ ಹೋಗಬಹುದಾಗಿರುವುದು ಈ ಚಿತ್ರದ ಸೌಂದರ್ಯ. ಜೊತೆಗೆ ಸಿನಿಮಾದಲ್ಲಿ ಹಾಕಿರುವ ಸೆಟ್ ಗಳು, ವಸ್ತ್ರವಿನ್ಯಾಸ ಎಲ್ಲವೂ ಕೂಡ ನೋಡುಗರನ್ನ 60ರ ದಶಕಕ್ಕೆ ಕೊಂಡೊಯ್ಯುವುದಂತೂ ಖಚಿತ. ಬದುಕು, ಬವಣೆ, ಭಾವನೆ ಎಲ್ಲದರ ಜೊತೆಗೆ ಹಾಸ್ಯವನ್ನು ತನ್ನದಾಗಿಸಿಕೊಂಡಿರುವ ಈ ಸಿನಿಮಾ ಇದೆ ಜುಲೈ 28ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ತನ್ನ ಬಿಡುಗಡೆ ದಿನಾಂಕ ಹೊರಹಾಕಿರುವ ‘ಆಚಾರ್ ಅಂಡ್ ಕೋ’ ಸಿನಿಮಾದ ಮತ್ತೊಂದು ಹೆಮ್ಮೆ, ಸಿನಿಮಾದ ತಂತ್ರಜ್ಞರು. ನಿರ್ದೇಶನ, ನಟನೆ, ಸಂಗೀತ ಬಹುಪಾಲು ಎಲ್ಲಾ ವಿಭಾಗದಲ್ಲೂ ಈ ಚಿತ್ರದಲ್ಲಿ ಮಹಿಳೆಯರದೇ ಮೇಲುಗೈ! ಸಿಂಧು ಶ್ರೀನಿವಾಸ ಮೂರ್ತಿ ಅವರು ಬರವಣಿಗೆ ಹಾಗು ನಿರ್ದೇಶನದ ಜೊತೆಗೆ ಕಥೆಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ,  ಇಂಚರಾ ಸುರೇಶ್ ವಸ್ತ್ರ ವಿನ್ಯಾಸ,  ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ ಜೊತೆಗೆ ಇನ್ನು ಹಲವು ಮಹಿಳೆಯರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಪಕಿ ಕೂಡ ಒಬ್ಬ ಹೆಣ್ಣುಮಗಳೇ, ಅಶ್ವಿನಿ ಪುನೀತ್ ರಾಜಕುಮಾರ್. ಇವರುಗಳ ಜೊತೆಗೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ ಈ ‘ಆಚಾರ್ ಅಂಡ್ ಕೋ’ ಸಿನಿಮಾದಲ್ಲಿದೆ.

ಈ ಬಗ್ಗೆ ಮಾತನಾಡುವ ‘ಆಚಾರ್ & ಕೋ’ ನಿರ್ಮಾಪಕಿ ಪವರ್ ಸ್ಟಾರ್ ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, “ಹೊಸ ರೀತಿಯ ಸಿನಿಮಾಗಳನ್ನ ನೀಡುತ್ತೇವೆ ಎಂದು ನಾವು ನೀಡಿದ್ದ ಭರವಸೆಯನ್ನ ಮುಂದುವರೆಸಿಕೊಂಡು ಹೋಗುವಂತಹ ಸಿನಿಮಾವಿದು. ಪ್ರತಿಯೊಬ್ಬರಿಗೂ ಹತ್ತಿರವಾಗುವಂತಹ, ನಮ್ಮದೇ ಕಥೆ ಎನಿಸುವಂತಹ ಕಥಾವಸ್ತು ಈ ಸಿನಿಮಾದಲ್ಲಿದೆ. ಇಂತಹ ಒಂದು ಉತ್ತಮ ಸಿನಿಮಾ ನಿರ್ಮಾಣ ಮಾಡಿರುವುದು, ನಮ್ಮ ಸಂಸ್ಥೆಗೆ ಒಂದು ಹೆಮ್ಮೆ. ಬಹುಪಾಲು ಮಹಿಳೆಯರೇ ಕೆಲಸ ಮಾಡಿರುವ ಈ ಸಿನಿಮಾ ನಮ್ಮ ಸಂಸ್ಥೆಗೆ ಒಂದು ಅತೀ ಅಮೂಲ್ಯವಾದ ಚಿತ್ರ. ಇದು ನಮ್ಮ ಚಿತ್ರರಂಗದಲ್ಲೂ ಅದೇ ರೀತಿಯಲ್ಲಿ ಅಚ್ಚಾಗಿ ಉಳಿಯುತ್ತದೆ ಎಂಬ ನಂಬಿಕೆ ನಮಗಿದೆ” ಎಂದಿದ್ದಾರೆ.

ಜೊತೆಗೆ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅವರ ಬಗೆಗೆ ಮಾತನಾಡುತ್ತ, “ಸಿಂಧು ಅವರ ಸಿನಿಮಾಪ್ರೇಮ, ಅವರ ಕಾರ್ಯವೈಖರಿ, ಕ್ರಿಯಾಶೀಲತೆಗಳೇ, ನಮ್ಮ ಸಂಸ್ಥೆ ಅವರೊಂದಿಗೆ ಕೈ ಜೋಡಿಸಿಕೊಂಡು ಹೋಗಲು ಒಂದು ಪ್ರಮುಖ ಕಾರಣ. ಅವರ ಪ್ರತೀ ಆಲೋಚನೆಗಳು ಕೂಡ ಸಿನಿಮಾರೂಪದಲ್ಲಿ ಅದ್ಭುತವಾಗಿ ಜೀವತಾಳಿವೆ. ಇದೆ ಅನುಭವ ಪ್ರೇಕ್ಷಕರಿಗೆ ಕೂಡ ಆಗುತ್ತದೆ ಎಂಬ ಭರವಸೆ ನಮ್ಮದು ” ಎಂದರು.

ಇಷ್ಟೆಲ್ಲಾ ಹೆಗ್ಗಳಿಕೆ ಹೊತ್ತಿರುವ ‘ಆಚಾರ್ ಅಂಡ್ ಕೋ’ ಸಿನಿಮಾದ ಹಾಡು, ಟೀಸರ್ ಹಾಗು ಟ್ರೈಲರ್ ಗಳನ್ನು ಸದ್ಯದಲ್ಲೇ ಪಿ ಆರ್ ಕೆ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗುವುದು. ಇದೇ ಜುಲೈ 28ಕ್ಕೆ ಈ ಸಿನಿಮಾ ಎಲ್ಲೆಡೆ ಬಿಡುಗಡೆ ಕಾಣಲಿದೆ.

RELATED ARTICLES

Most Popular

Share via
Copy link
Powered by Social Snap