ತಮ್ಮ ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರ “90 ಬಿಡಿ ಮನೀಗ್ ನಡಿ” ಚಿತ್ರ ರಿಲೀಸ್ ಗೆ ರೆಡಿಯಾಗಿದೆ.
ಇದು ಅವರ 500ನೇ ಚಿತ್ರವೂ ಹೌದು.
ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ “90 ಬಿಡಿ ಮನೀಗ್ ನಡಿ…’ ಸಿನಿಮಾವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಅವರೊಂದಿಗೆ ಕರಿಸುಬ್ಬು, ನೀತಾ, ಪ್ರೀತು ಪೂಜಾ, ಧರ್ಮ, ಪ್ರಶಾಂತ್ ಸಿದ್ಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಈಗಾಗಲೇ ಸದ್ದಿಲ್ಲದೆ ಬಹುತೇಕ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “90 ಬಿಡಿ ಮನೀಗ್ ನಡಿ…’ ಸಿನಿಮಾದ ಟ್ರೇಲರ್ ಮತ್ತು ಮೊದಲ ಹಾಡನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ನಟ ವೈಜನಾಥ್ ಬಿರಾದಾರ್, “ರಂಗಭೂಮಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾನು ನಂತರ ಸಿನಿಮಾಕ್ಕೆ ಬಂದೆ. ಇಲ್ಲಿಯವರೆಗೆ 500 ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಡಾ. ರಾಜಕುಮಾರ್ ಅವರಿಂದ ಹಿಡಿದು ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದರ್ಶನ್ ಹೀಗೆ ಇಂದಿನ ಅನೇಕ ಸ್ಟಾರ್ ಜೊತೆ ಅಭಿನಯಿಸಿದ್ದೇನೆ. ನಾನೊಬ್ಬ ಕಲಾವಿದ, ಕಲಾಸೇವೆ ಮಾಡುವುದು ನನಗೆ ಖುಷಿ ಕೊಡುತ್ತದೆ. ಈ ಸಿನಿಮಾದಲ್ಲೂ ಕೂಡ ಅಗರಬತ್ತಿ ಮಾರುವ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಪಾತ್ರ ಮತ್ತು ನಿರ್ದೇಶಕರು ಬಯಸಿದ್ದರಿಂದ ಹಾಡಿನಲ್ಲಿ ಕಾಣಿಸಿಕೊಳ್ಳಬೇಕಾಯ್ತು. ತುಂಬಾ ಚೆನ್ನಾಗಿ ಸಿನಿಮಾ ಮತ್ತು ಹಾಡುಗಳು ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.


ಬಿರಾದಾರ್ ಅವರಲ್ಲಿ ವಿಶೇಷ ಶಕ್ತಿ ಇದೆ.ಈ ವಯಸ್ಸಿನಲ್ಲಿ ಅವರು ಈ ರೀತಿ ನೃತ್ಯ ಮಾಡಿದ್ದು ನೋಡಿ ಕಣ್ಣೀರು ಬಂತು. ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದರು ನಟ ಧರ್ಮ.
500ನೇ ಸಿನಿಮಾ ಆದರೂ ಮೊದಲ ಚಿತ್ರದ ಹುಮ್ಮಸಿನಲ್ಲಿ ಬಿರಾದಾರ್ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಸೊಗಡಿನ ಚಿತ್ರ. ನಾನು ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ ಎಂದು ಕರಿಸುಬ್ಬು ತಿಳಿಸಿದರು.

